ಊಜಿ [ಟ್ಯೂಟ ಅಬ್ಸಲೂಟ] ಹುಳು - ಟೊಮ್ಯಾಟೊ ಬೆಳೆಯ ಪರಮ ಶತ್ರು - ನಿವಾರಣಾ ಕ್ರಮಗಳು
ಭಾರತದ ರೈತರು ಟೊಮ್ಯಾಟೊ ಬೆಳೆಯನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಿದ್ದಾರೆ. ಇತರ ಬೆಳೆಗಳ ಹಾಗೆಯೇ ಟೊಮ್ಯಾಟೊ ಬೆಳೆಗೆ ಕೀಟಗಳ ಮತ್ತು ರೋಗಗಳ ಬಾದೆ ತಪ್ಪಿದ್ದಲ್ಲ ಹೆಚ್ಚಿಗೆಯೇ ಇದೆ. ಇತ್ತೀಚಿಗೆ ಕೀಟಗಳಲ್ಲಿ ಊಜಿ [ಟ್ಯೂಟ ಅಬ್ಸಲೂಟ] ಕೀಟ/ಹುಳು ಹೆಚ್ಚು ಮಾರಕವಾಗಿ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಊಜಿ ನೊಣವನ್ನು ದಕ್ಷಿಣ ಅಮೆರಿಕಾದ ಪಿನ್‌ವರ್ಮ್ ಎಂದೂ ಕರೆಯುತ್ತಾರೆ. ಊಜಿ ನೊಣ ಹಾವಳಿ ಟೊಮ್ಯಾಟೊ ಬೆಳೆಗೆ ಎಲ್ಲಾ ಹಂತಗಳಲ್ಲೂ ಹಾನಿ ಮಾಡಬಲ್ಲದು.
ಈ ಟ್ಯೂಟ ಅಬ್ಸಲೂಟ ಊಜಿ ಹುಳು, ಟೊಮ್ಯಾಟೊ ಗಿಡದ ಎಲೆಗಳು, ಹಣ್ಣುಗಳು ಮತ್ತು ಕಾಂಡಗಳ ಮೇಲೆಯೂ ದಾಳಿ ಮಾಡುವ ಶಕ್ತಿ ಹೊಂದಿದ್ದು, ಶೇಕಡ 100 % ರಷ್ಟೂ ಬೆಳೆ ನಷ್ಟ ಮಾಡುವ ಸಾಮರ್ಥ್ಯವಿದೆ.
ಊಜಿ ಹುಳುವಿನ ಚಿಟ್ಟೆಯ ಸಂತಾನೋತ್ಪತ್ತಿ ಸಾಮರ್ಥ್ಯವು ಹೆಚ್ಚು ಮತ್ತು ವಿಚಿತ್ರ ವೆಂದರೆ ಅನುಕೂಲಕರ ಪರಿಸ್ಥಿತಿಗಳಲ್ಲಿ ಈ ಊಜಿ ಕೀಟವು ವರ್ಷದಲ್ಲಿ 10-12 ತಲೆಮಾರಗಳನ್ನು ಮುಗಿಸುತ್ತದೆ. ಊಜಿ ಕೀಟವು ಟೊಮ್ಯಾಟೊ ಸಸ್ಯಗಳನ್ನು ಮೊಳಕೆಗಳಿಂದ ಬೆಳೆದು ನಿಂತ ಸಸ್ಯಗಳವರೆಗೆ ದಾಳಿ ಮಾಡಬಹುದು. ಊಜಿ ಕೀಟದ ಈ ಲಕ್ಷಣಗಳಿಂದ ರೈತರಿಗೆ ಊಜಿ ಹಾವಳಿಯನ್ನು ನಿಯಂತ್ರಿಸಲು ಕಷ್ಟವಾಗಿ ಅವರಿಗೆ ಇದು ಒಂದು ಗಂಭೀರ ಕೀಟವಾಗಿಬಿಟ್ಟದೆ.
ರೈತರು ಸಂಯೋಜಿತ ಕೀಟ ನಿರ್ವಹಣೆ (ಇಂಟಿಗ್ರೇಟೆಡ್ ಇನ್ಸೆಕ್ಟ್ ಮ್ಯಾನೇಜ್ಮೆಂಟ್) ಪದ್ದತಿಗಳನ್ನು ಅನುಸರಿಸಿದರೆ ಮಾತ್ರ ಈ ಆಕ್ರಮಣಕಾರಿ ಊಜಿ [ಟ್ಯೂಟ ಅಬ್ಸಲೂಟ] ಕೀಟದ ಪರಿಣಾಮಕಾರಿ ನಿರ್ವಹಣೆ ಮಾಡಬಹುದಾಗಿದೆ.
ಊಜಿ ಕೀಟ/ಹುಳುವಿನ ಹಾನಿಯ ಸಾಮಾನ್ಯ ಚಿಹ್ನೆಗಳು ಮತ್ತು ಲಕ್ಷಣಗಳು
ಎಲೆಗಳ ಮೇಲೆ
ಊಜಿ ಮರಿಹುಳುಗಳು [ಲಾರ್ವಾ] ಮೊಟ್ಟೆಯೊಡೆದ ನಂತರ, ತಕ್ಷಣ ಎಲೆಗಳ ಒಳಗೆ ನುಸುಳಿ ಕೊರೆಯುತ್ತಾ ಎಲೆಗಳ ಒಳಗೆ ದೊಡ್ಡ ಸುರಂಗಗಳನ್ನು ಮಾಡುತ್ತವೆ. ಎಲೆಗಳ ಮೇಲ್ಮೈ ಲೆಕ್ಕವಿಲ್ಲದಷ್ಟು ತೇಪೆಗಳನ್ನು ಹಾಕಿದ ಹಾಗೆ ಕಾಣುತ್ತದೆ.
ಹಣ್ಣು ಮತ್ತು ಕಾಂಡಗಳ ಮೇಲೆ
ಟೊಮ್ಯಾಟೊ ಹಣ್ಣುಗಳ ಮೇಲೆ ಊಜಿ ಹುಳುಗಳ ಚ್ಚುಚ್ಚವಿಕೆಯ ಪಂಕ್ಚರ್ ಗುರುತುಗಳು ಕಾಣಬಹುದು.ಊಜಿ ಹುಳು ಭಾದಿತ ಟೊಮ್ಯಾಟೊ ಸಸಿಯಲ್ಲಿ ಆಕಾರವಿಲ್ಲದ ಹಣ್ಣುಗಳು, ಹಣ್ಣುಗಳಿಂದ ಹುಳು ಹೊರ ಬಂದಿರುವ ರಂದ್ರಗಳು, ಊಜಿ ಹುಳುಗಳು ಹಣ್ಣಿನ ಅಂಗಾಂಶವನ್ನು ತಿಂದು ಜೀರ್ಣಿಸಿದ ನಂತರ ತ್ಯಾಜ್ಯವಾಗಿ ಹೊರಬಿಡುವ ನುಣ್ಣನೆಯ ಪುಡಿ, ಹಣ್ಣುಗಳ ಗುಣಮಟ್ಟವನ್ನು ಕಡಿಮೆಮಾಡಿರುವುದನ್ನು ಕಾಣಬಹುದು.
ಊಜಿ ಕೀಟದ ಆತಿಥೇಯ ಸಸ್ಯಗಳು:
ಟೊಮ್ಯಾಟೊ , ಆಲೂಗಡ್ಡೆ ಬದನೇಕಾಯಿ, ಬೀನ್ಸ್ ಕಾಳು ಮೆಣಸು ಮತ್ತು ತಂಬಾಕು ಬೆಳೆಗಳ ಮೇಲೆ ಇದರ ಹಾವಳಿ ಇರುತ್ತದೆಯಾದರೂ ಟೊಮ್ಯಾಟೊ ಬೆಳೆಯನ್ನು ಹೆಚ್ಚಾಗಿ ಆಕ್ರಮಿಸುತ್ತದೆ.
ಊಜಿ [ಟ್ಯೂಟ ಅಬ್ಸಲೂಟ] ಕೀಟದ ನಿರ್ವಹಣೆ ರೈತರಿಗೆ ತಲೆನೋವಾಗಿ ಹತೋಟಿ ಕಷ್ಟವಾಗಿದೆ. ಆದುದರಿಂದ ಕೀಟದ ಎಲ್ಲ ಹಂತಗಳ ಬಗ್ಗೆ ಅರಿತು, ಎಲ್ಲಾ ಹಂತಗಳನ್ನು ನಾಶ ಪಡಿಸಿದರೆ ಮಾತ್ರ ಹಾವಳಿ ಕಡಿಮೆ ಮಾಡಬಹದು ಬೆಳೆ ನಷ್ಟವನ್ನು ಕಡಿಮೆ ಮಾಡಬಹುದು.
ಊಜಿ ನೊಣದ ಹಂತಗಳು ಮತ್ತು ಜೀವನ ಚಕ್ರ:
ಮೊಟ್ಟೆ: ಅವಧಿ- 7 ದಿನಗಳು.
ಮೊಟ್ಟೆಗಳು ಕೆನೆ ಬಿಳಿ ಮಿಶ್ರಿತ ಹಳದಿ ಬಣ್ಣದಿಂದ ಕೂಡಿದ್ದು ಅಂಡಾಕಾರದಲ್ಲಿರುತ್ತವೆ. ಮೊಟ್ಟೆಗಳು 0.35 ಮಿ.ಮೀ ಉದ್ದವಿರುತ್ತವೆ. ಊಜಿ ಚಿಟ್ಟೆಯು ಸಾಮಾನ್ಯವಾಗಿ ಎಲೆಗಳು, ಮೊಗ್ಗುಗಳು, ಕಾಂಡಗಳು ಮತ್ತು ಎಳೆ ಹಣ್ಣುಗಳ ತೊಟಗಳು [ಕ್ಯಾಲಿಕ್ಸ್‌ನ] ಕೆಳಗೆ ಮೊಟ್ಟೆಗಳನ್ನು ಇಡುತ್ತದೆ.
ಊಜಿ ಹುಳುಗಳು [ಲಾರ್ವಾ]: ಅವಧಿ-11 ದಿನಗಳು
ಊಜಿ ಹುಳುಗಳು [ಲಾರ್ವಾ] ಕಂದು ಬಣ್ಣದ್ದಾಗಿದ್ದು ಅವುಗಳ ತಲೆಗಳು ಕಪ್ಪು ಬಣ್ಣದಲ್ಲಿರುತ್ತವೆ. ಹುಳುಗಳು ಎರಡನೆ ಹಂತದಲ್ಲಿ ಹಸಿರು ಬಣ್ಣದಿಂದ ಕೂಡಿದ್ದು ನಾಲ್ಕನೇ ಹಂತ ತಲುಪುದರಲ್ಲಿ ತಿಳಿ ಗುಲಾಬಿ ಬಣ್ಣಕ್ಕೆ ತಿರುಗುತ್ತವೆ. ಮೊದಲನೆ ಹಂತದ ಹುಳುವಿನ ಉದ್ದ 0.9 ಮಿ.ಮೀ. ವಿದ್ದು ನಾಲ್ಕನೇ ಹಂತದಲ್ಲಿ 7.5 ಮಿ.ಮೀ. ರವರೆಗೆ ಬೆಳೆಯುತ್ತದೆ. ಮೊಟ್ಟೆಯೊಡೆದ ನಂತರ, ಊಜಿ ಮರಿಹುಳುಗಳು ತಕ್ಷಣ ಸಸ್ಯ ಅಂಗಾಂಶವನ್ನು ಭೇದಿಸಿ ಒಳಗೆ ನುಸುಳಿ ತಿನ್ನಲಾರಂಭಿಸುತ್ತವೆ. ಊಜಿ ಹುಳುಗಳು ನಾಲ್ಕನೇ ಹಂತ ಮುಗಿದ ನಂತರ ರೇಷ್ಮೆ ದಾರದ ಮಾದರಿಯ ತಂತಿಯನ್ನು ತಯಾರಿಸಿ ಅದರ ಸಹಾಯದಿಂದ ನೆಲಕ್ಕೆ ಬಿದ್ದು ಕೋಶಾವಸ್ಥೆ ಜೀವನವನ್ನು ಮುಂದುವರೆಸುತ್ತದೆ.
ಊಜಿ ಚಿಟ್ಟೆಯ ಕೋಶ [ಪ್ಯೂಪಾ] : ಅವಧಿ-5 ದಿನಗಳು
ಊಜಿ ಚಿಟ್ಟೆಯ ಕೋಶ [ಪ್ಯೂಪಾ]ಗಳು ಮೊದಲೇ ಹೇಳಿದ ಹಾಗೆ ಸಾಮಾನ್ಯವಾಗಿ ಮಣ್ಣಿನಲ್ಲಿ ತನ್ನ ಅವಸ್ಥೆಯನ್ನು ಮುಗಿಸುತ್ತದೆ. ಊಜಿ ಚಿಟ್ಟೆಯ ಕೋಶ 6 ಮಿ. ಮೀ ಉದ್ದ ಮತ್ತು ಕಂದು ಬಣ್ಣ ಹೊಂದಿರುತ್ತವೆ. ಊಜಿ ಚಿಟ್ಟೆಯ ಕೋಶ [ಪ್ಯೂಪ] ಗಳು ಕೆಲವೊಮ್ಮೆ ಎಲೆಗಳ ಮೇಲೆ, ಕೆಲವೊಮ್ಮೆ ಹೂಗಳು, ಹಣ್ಣು ಮತ್ತು ಕಾಂಡಗಳ ಮೇಲೆಯೂ ಕಂಡುಬರುತ್ತವೆ.
ವಯಸ್ಕ ಊಜಿ ಚಿಟ್ಟೆ : ಅವಧಿ: ಹೆಣ್ಣು ಕೀಟ - 10 15 ದಿನಗಳವರೆಗೆ ಮತ್ತು ಗಂಡು ಕೀಟ 6-7 ದಿನಗಳವರೆಗೆ ಜೀವಿಸುತ್ತದೆ.
ವಯಸ್ಕ ಊಜಿ ಚಿಟ್ಟೆಗಳು 5 ದಿನಗಳ ಕೋಶವಾಸ್ಥೆ ಮುಗಿಸಿ ನಂತರ ಚಿಟ್ಟೆಯಾಗಿ ರೂಪಾಂತರಗೊಂಡು ಹಾರಲಾರಂಭಿಸುತ್ತವೆ. ಊಜಿ ಚಿಟ್ಟೆಗಳ ದೇಹದ ಉದ್ದ -7 ಮಿ.ಮೀ. ಇರುತ್ತದೆ. ಚಿಟ್ಟೆಗಳು ಕಂದು ಅಥವಾ ಬೆಳ್ಳಿಯ ಬಣ್ಣವಾಗಿದ್ದು ರೆಕ್ಕೆಗಳ ಮೇಲೆ ಕಪ್ಪು ಕಲೆಗಳಿರುತ್ತವೆ. ಊಜಿ ಚಿಟ್ಟೆಗಳು ರಾತ್ರಿಯ ವೇಳೆಯಲ್ಲಿ ಸಕ್ರಿಯವಾಗಿರುತ್ತವೆ ಹಾಗು ಹಗಲಿನ ವೇಳೆಯಲ್ಲಿ ಅವು ಎಲೆಗಳ ನಡುವೆ ಅಡಗಿಕೊಳ್ಳುತ್ತವೆ.
ಊಜಿ ಹುಳು/ ಕೀಟದ ನಿರ್ವಹಣೆ ಕ್ರಮಗಳು:
ವ್ಯಾವಸಾಯಿಕ ಪದ್ದತಿ
- ಪ್ರಸ್ತುತ ಟೊಮ್ಯಾಟೊ ಬೆಳೆ ಮಾಡಬಯಸುವ ಸಮೀಪದಿಂದ ಹಿಂದಿನ ಬೆಳೆ ಉಳಿಕೆಗಳನ್ನು ಮತ್ತು ಪರ್ಯಾಯ ಆತಿಥೇಯ ಬೆಳಗಳನ್ನು ತೆಗೆದು ನಾಶ ಮಾಡಬೇಕು ಹಾಗೂ ಸಮೀಪ ಪರ್ಯಾಯ ಆತಿಥೇಯ ಬೆಳಗಳಿದ್ದರೆ ಟೊಮ್ಯಾಟೊ ಬೆಳೆ ಮಾಡ ಬಾರದು.
- ಊಜಿ ಕೀಟವನ್ನು ನಿಯಂತ್ರಿಸಲು ತನ್ನ ಸ್ವಜಾತಿಯ [ಸೋಲನೇಶಿಯಸ್] ಅಲ್ಲದ ಬೆಳೆಗಳೊಂದಿಗೆ ಸರದಿ ಬೆಳೆ ಮಾಡುವುದು, ಸಾಕಷ್ಟು ನೀರಾವರಿ ಮತ್ತು ಪೋಷಕಾಂಶಗಳ ನಿರ್ವಹಣೆ, ಊಜಿ ಕೀಟ ಮುತ್ತಿದ ಸಸ್ಯಗಳನ್ನು ತೆಗೆಯುವುದು, ಕಟಾವು ನಂತರದ ಸಸ್ಯ ಪಳಿಯುಳಿಕೆ ಮತ್ತು ಹಣ್ಣುಗಳನ್ನು ಸಂಪೂರ್ಣವಾಗಿ ತೆಗೆಯಬೇಕು.
- ಬೆಳೆ ಮಾಡುತ್ತಿರುವ ಪ್ರದೇಶದ ಸಮೀಪ ಕಾಡು ಸ್ವಜಾತಿಯ ಆತಿಥೇಯ ಸಸ್ಯಗಳನ್ನು ತೆಗೆಯುವುದು ಸಹ ಪರಿಣಾಮಕಾರಿಯಾಗಿದೆ, ಏಕೆಂದರೆ ಇವು ಊಜಿ ಕೀಟದ ಎಲ್ಲಾ ಹಂತಗಳನ್ನು ಆತಿಥ್ಯ ವಹಿಸುತ್ತವೆ, ಅದು ನಂತರ ಬೆಳೆಯುತ್ತಿರುವ ಬೆಳೆಯನ್ನು ಮತ್ತೆ ಆಕ್ರಮಣ ಮಾಡಬಹುದು.
ಯಾಂತ್ರಿಕ ಪದ್ದತಿ
- ಊಜಿ ಕೀಟಗಳು ಕೋಶಾವಸ್ಥೆಯಿಂದ ರೂಪಾಂತರ ಗೊಂಡ ನಂತರ ಗಂಡು ಹೆಣ್ಣು ಸೇರಬೇಕು, ಸೇರುವ ಹೆಣ್ಣು ನೊಣ ಆಕರ್ಷಕ ದ್ರವ್ಯ ವನ್ನು ಬಿಡುಗಡೆ ಮಾಡಿ ಗಂಡು ನೊಣವನ್ನು ತನ್ನ ಬಳಿ ಆಕರ್ಷಿಸುತ್ತದೆ.
- ಊಜಿ ನೊಣದ ಈ ನಡತೆಯನ್ನು ಗಮನದಲ್ಲಿರಿಸಿಕೊಂಡು ಕೃತಕ ಆಕರ್ಷಕಗಳನ್ನು [ಆಕರ್ಷಕ ಬಲೆ - ಫೆರೋಮೋನ್ ಬಲೆ- Pheromone traps] ಬಳಸಿ ಗಂಡು ಚಿಟ್ಟೆಗಳನ್ನು ಒಂದು ಕಡೆ ಆಕರ್ಷಿಸಿ ಹೆಣ್ಣು ಚಿಟ್ಟೆಯೊಂದಿಗೆ ಸೇರಲು ಅವಕಾಶಕೊಡದೆ ಕೊಲ್ಲುವ ವಿಧಾನವನ್ನು ಅಳವಡಿಸಬಹುದು.
- ಹೆಣ್ಣು ಚಿಟ್ಟೆಗೆ ಮೊಟ್ಟೆಯಿಡಲು ಕಡಿಮೆ ಸಮಯವಿರುವುದರಿಂದ ಗಂಡು ಚಿಟ್ಟೆಯೊಂದಿಗೆ ಸಂಭೋಗ ವಿಲ್ಲದೆ ಮೊಟ್ಟೆ ಇಟ್ಟರೂ ಅವು ಮರಿಯಾಗುವುದಿಲ್ಲ. ಆಗ ಉಜಿಯ ಹಾವಳಿ ಕಡಿಮೆ ಯಾಗುತ್ತದೆ.
- ಮೊದಲೇ ಹೇಳಿದಂತೆ ಊಜಿ ಚಿಟ್ಟೆಗಳು ರಾತ್ರಿಯ ವೇಳೆ ಹೆಚ್ಚು ಸಕ್ರಿಯ ವಾಗಿರುವುದರಿಂದ, ಈ ಆಕರ್ಷಕ ಬಲೆಗಳನ್ನು ವಿದ್ಯುತ್ ದೀಪ [ಲೈಟ್ ಟ್ರ್ಯಾಪ್] ನ ಸಹಾಯವನ್ನು ಕೊಟ್ಟರೆ ಹೆಚ್ಚು ಪರಿಣಾಮಕಾರಿ.
- ಫೆರೋಮೋನ್ ಬಲೆಗಳ ಬಳಕೆಯು ಊಜಿ ಚಿಟ್ಟೆ ಇರುವಿಕೆಯನ್ನೂ ಕಂಡುಹಿಡಿಯಲು ಅನುಕೂಲವಾಗುತ್ತದೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ನಿರ್ಧರಿಸಲು ಸಹಾಯ ವಾಗುತ್ತದೆ. ಊಜಿ ಕೀಟದ ದಾಳಿ ಮತ್ತು ಪ್ರಭಾವ ಗಂಭೀರವಾಗುವುದಕ್ಕಿಂತ ಮುಂಚಿತವಾಗಿ ನಿಯಂತ್ರಿಸಲು ರೈತರನ್ನು ಎಚ್ಚರಿಸುತ್ತದೆ.
- ಇನ್ಕ್ಯಾಂಡೆಸೆಂಟ್ ಬಲ್ಬ್ @ ಒಂದು ಬಲ್ಬ್ / 150 ಚಮೀ + 1 ಆಕರ್ಷಕ ಬಲೆ - ಫೆರೋಮೋನ್ ಬಲೆ[Pheromone traps] / 300 ಚಮೀ.
ರಾಸಾಯನಿಕ ನಿಯಂತ್ರಣ:
ಮೊಟ್ಟೆ ಮತ್ತು ಲಾರ್ವಾಗಳನ್ನು ನಿರ್ಮೂಲನೆ ಮಾಡಲು,
ಬೇವಿನ ಎಣ್ಣೆ[ಎಕೋನೀಮ್ ಪ್ಲಸ್ 1% OR ನೀಮಾರ್ಕ್ 1%] - 1 ಮೀ.ಲೀ / ಲೀ + ಟ್ರಾನ್ಸ್ಲ್ಯಾಮಿನಾರ್ ಕ್ರಿಯೆ ವಿಧಾನದ ಕೀಟನಾಶಕಗಳು ಎಕಲಕ್ಸ್ 2 ಮೀ.ಲೀ / ಲೀ ಅಥವಾ ಅಬಾಸಿನ್ 1 ಮೀ.ಲೀ / ಲೀನೀರಿಗೆ ಬೆರಿಸಿ ಸಿಂಪಂಡನೆ ಮಾಡಬೇಕು
ಬೆಳೆ ಹಂತದಲ್ಲಿ 20 ರಿಂದ 25 ದಿನಗಳವರೆಗೆ ಎಕರೆಗೆ 200 ಎಂ.ಎಲ್. ಡುಪಾಂಟ್ ಬೆನೆವಿಯಾ ಸಿಂಪಡಿಸಿ.
ಊಜಿ ಕೀಟದ ಕೋಶಗಳು [ಪ್ಯೂಪಗಳ]ಅವುಗಳನ್ನು ನಿರ್ಮೂಲನೆ ಮಾಡಲು ಅಂತರ್ವ್ಯಾಪಿ ಕೀಟನಾಶಕಗಳನ್ನು ಮಣ್ಣಿಗೆ ಸಿಂಪಡಿಸಬಹುದು
[ಪ್ರಿಡೇಟರ್ ಅಥವಾ ಡರ್ಮೆಟ್] 3 ಮೀ.ಲೀ / ಲೀ.
ಜೊತೆಗೆ ಕಾರ್ಟಾಪ್ ಹೈಡ್ರೋಕ್ಲೋರೈಡ್ 4% [ಕ್ಯಾಲ್ಡಾನ್] ಎಕರೆಗೆ 5 ಕೆಜಿ ಮಣ್ಣಿಗೆ ಸೇರಿಸಿ.
ಊಜಿ ಕೀಟಗಳನ್ನು ನಿರ್ವಹಣೆ ಮಾಡಲು ಈ ಕೆಳಗಿನ ಮಿಶ್ರಣವನ್ನು ಸಿಂಪಡಿಸಿ -
ಲ್ಯಾಂಬ್ಡಾಸೈಹಲೋಥ್ರಿನ್ [ಕರಾಟೆ] 2 ಮೀ.ಲೀ / ಲೀ + ಬೇವಿನ ಎಣ್ಣೆ [ಎಕೋನೀಮ್ ಪ್ಲಸ್ 1% OR ನೀಮಾರ್ಕ್ 1%]] 1 ಮೀ.ಲೀ / ಲೀ OR
ಡೈನಿಟಾಫೆರೊನ್ [ಓಶಿನ್ ಅಥವಾ ಟೋಕನ್] 0.5 ಗ್ರಾಂ / ಲೀ
ಕೀಟದ ನಿವಾರಣೆ ಎಷ್ಟು ಕಷ್ಟವಾಗಿದೆ ಎಂದರೆ ರೈತರು ಯಾರ ಅಥವಾ ಯಾವ ನಿರ್ಧರಿತ ಶಿಫಾರಸ್ಸು ಇಲ್ಲದೆ ಇದ್ದರೂ ಕೀಟ ನಾಶಕಗಳನ್ನು ಮಿಶ್ರಣ ಮಾಡಿ ಸಿಂಪಡಿಸುತ್ತಿದ್ದಾರೆ. ಹಾಗೆ ಮಾಡಿದಲ್ಲಿ ಭವಿಷ್ಯದಲ್ಲಿ ಊಜಿ ಕೀಟವು ಕೀಟನಾಶಕಗಳಿಗೆ ಇನ್ನಷ್ಟು ಕಠಿಣವಾಗಿ ನಿರೋಧಕತೆ ಬೆಳಸಿಕೊಂಡು, ನಿಯಂತ್ರಣ ಇನ್ನಷ್ಟು ಕಷ್ಟವಾಗಬಹುದು.
++++++++
ಹೆಚ್ಚಿನ ಮಾಹಿತಿಗೆ ಕಛೇರಿ ಸಮಯದಲ್ಲಿ 8050797979 ಗೆ ಕರೆ ಮಾಡಿ ಅಥವಾ 180030002434 ಗೆ ಮಿಸ್ಡ್ ಕಾಲ್ ನೀಡಿ. 8050797979 ಗೆ ವಾಟ್ಸಾಪ್ ಕೂಡ ಮಾಡಬಹುದು
***
K SANJEEVA REDDY,
LEAD Agronomist, BigHaat.
--------------------------------------------------------------------------- Disclaimer: The performance of the product (s) is subject to usage as per manufacturer guidelines. Read enclosed leaflet of the product(s) carefully before use. The use of this product(s)/ information is at the discretion of user.
Leave a comment